ಅಮೆರಿಕ: ಇತಿಹಾಸ ಸೃಷ್ಟಿಸಿದ ಹಿಲರಿ
ಲಾಸ್ ಏಂಜಲಿಸ್ (ಪಿಟಿಐ): ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಅವರು ನಾಮನಿರ್ದೇಶನಗೊಳ್ಳುವುದು ಖಚಿತವಾಗಿದ್ದು, ಈ ಮೂಲಕ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಮತ್ತು ರಿಪಬ್ಲಿಕನ್ ಪಕ್ಷದ ವಿವಾದಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಗದ್ದುಗೆಗಾಗಿ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.
ಮಂಗಳವಾರದ ಪ್ರಾಥಮಿಕ ಚುನಾವಣೆಗಳಲ್ಲಿ ಅವರು ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ ಮತ್ತು ಸೌತ್ ಡಕೋಟಾ ರಾಜ್ಯಗಳಲ್ಲಿ ಗೆಲುವು ಕಾಣುವ ಮೂಲಕ ಡೆಮಾಕ್ರಟಿಕ್‌ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡು ಇತಿಹಾಸ ಸೃಷ್ಟಿಸಿದ್ದಾರೆ.
ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳಲು ಅಗತ್ಯವಾಗಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಪಡೆದಿರುವ ಹಿಲರಿ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಪರವಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಅಭಿನಂದಿಸಿದ್ದಾರೆ. ಆದರೆ ಒಬಾಮ ಅವರು ಇನ್ನೂ ಅಧಿಕೃತ ಅಭಿನಂದನೆ ಹೇಳಿಕೆ ನೀಡಿಲ್ಲ.
‘ನಿಮ್ಮೆಲ್ಲರಿಗೂ ಧನ್ಯವಾದಗಳು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಮುಖ ಪಕ್ಷದಿಂದ ಮಹಿಳೆಯೊಬ್ಬಳು ನಾಮನಿರ್ದೇಶನಗೊಳ್ಳುವ ಮೂಲಕ ನಾವು ಮೈಲುಗಲ್ಲನ್ನು ಮುಟ್ಟಿದ್ದೇವೆ’ ಎಂದು ಬುಧವಾರ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ರಚಾರದ ವೇಳೆ ಅವರು ಹೇಳಿದ್ದಾರೆ.
‘ಹಿಲರಿ ಅವರ ಐತಿಹಾಸಿಕ ಪ್ರಚಾರ ವೈಖರಿಯು ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡಿದೆ. ಇದು ಮಧ್ಯಮ ವರ್ಗದ ಕುಟುಂಬ ಮತ್ತು ಮಕ್ಕಳಿಗಾಗಿ ಅವರು ಜೀವನದುದ್ದಕ್ಕೂ ನಡೆಸಿದ ಹೋರಾಟದ ವಿಸ್ತರಣೆಯಾಗಿದೆ’ ಎಂದು ಜೋಶ್ ಅರ್ನೆಸ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಲರಿ ಮತ್ತು ಅವರ ಎದುರಾಳಿ ಬೆರ್ನಿ ಸ್ಯಾಂಡರ್ಸ್ ಇಬ್ಬರಿಗೂ ಕರೆ ಮಾಡಿದ ಒಬಾಮ, ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಲ್ಲಿ ಉತ್ಸಾಹ ಮೂಡಿಸುವ ಪ್ರಚಾರ ನಡೆಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಒಬಾಮ ಅವರು ಸ್ಯಾಂಡರ್ಸ್ ಮನವಿ ಮೇರೆಗೆ ಅವರನ್ನು ಶ್ವೇತಭವನದಲ್ಲಿ ಗುರುವಾರ ಭೇಟಿಯಾಗಲಿದ್ದಾರೆ.
‘ಪೈಪೋಟಿ ಮುಂದುವರಿಯಲಿದೆ’: ಹಿಲರಿ ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ತಮ್ಮ ಸೋಲು ಒಪ್ಪಿಕೊಂಡಿಲ್ಲ. ಹಿಲರಿ ಅವರು 2,755 ಪ್ರತಿನಿಧಿಗಳ ಬೆಂಬಲ ಹೊಂದಿದ್ದರೆ, ಸ್ಯಾಂಡರ್ಸ್ ಅವರಿಗೆ 1,852 ಪ್ರತಿನಿಧಿಗಳ ಬೆಂಬಲವಿದೆ.
ಮಂಗಳವಾರದ ಚುನಾವಣೆಯಲ್ಲಿ ಮಂಟಾನ ಮತ್ತು ನಾರ್ತ್ ಡಕೋಟಾಗಳಲ್ಲಿ ಗೆಲುವು ಕಂಡಿರುವ ಸ್ಯಾಂಡರ್ಸ್ ಅವರು ಹಿಲರಿ ಎದುರು ಸೋಲೊಪ್ಪಿಕೊಳ್ಳಲು ನಿರಾಕರಿಸಿದ್ದು, ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದಾರೆ.
ಮುಂದಿನ ಮಂಗಳವಾರ ನಡೆಯಲಿರುವ ವಾಷಿಂಗ್ಟನ್, ವಾಷಿಂಗ್ಟನ್ ಡಿಸಿಗಳಲ್ಲಿನ ಪ್ರಾಥಮಿಕ ಚುನಾವಣೆಗಳನ್ನು ಗೆಲ್ಲಲು ಕಠಿಣ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ.